Tuesday, July 17, 2007

ಗೆಳತಿ ಸಪ್ತಮಿಗೆ……

ಪ್ರೀತಿ ಅಂದ್ರೆ ನೇ ಹಾಗೆ ಒಂಥರಾ ಫಜೀತಿ, ಯಾಕ್ ಅಂದ್ರೆ ಯಾರಿಗೂ ತಿಳಿಯದು ಅದು ಹುಟ್ಟುವ ರೀತಿ. ಪ್ರೀತಿ ವಿಚಿತ್ರ ವಿಸ್ಮಯ. ಅಂತದೊಂದು ಫಜೀತಿಗೆ ನಾವಿಬ್ಬರೂ ಸಿಲುಕಿದ್ದು ನಮ್ಮೂರ ಜಾತ್ರೇಲಿ, ಅಂದು ರಥ ಸಪ್ತಮಿ. ನೀನು ಆ ದಿನ ಗಿಳಿ ಹಸಿರು ಬಣ್ಣದ ಚೂಡಿ ದಾರ ತೊಟ್ಟು ರಥ ಬೀದಿ ತುಂಬಾ ಲವಲವಿಕೆಯಿಂದ ಓಡಾಡುತಿದ್ದೆ. ಸಿಕ್ಕ ಸಿಕ್ಕ ಬಳೆ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಆಲಾಂಕರಿಕ ಸಾಮಗ್ರಿಗಳನ್ನು ಕೊಂಡು ಕೊಳ್ಳುತಿದ್ದೆ. ಅದನ್ನು ನೋಡಿದ ನಾನು ನಿನ್ನನ್ನು ಗೇಲಿ ಮಾಡಿದ್ದೆ. ಸಿಟ್ಟು ಮಾಡಿಕೊಂಡ ನೀನು ನಿನ್ನ ಅಮ್ಮನ ಹತ್ರ ದೂರು ಹೇಳಿ ವಾಪಸು ಬರೋವಾಗ ಜೊತೆಗೆ ನಿನ್ನ ತಮ್ಮನಿದ್ದ, ಬಾಡಿ ಗಾರ್ಡ್ ನಂತೆ. ಆದರೆ ನನ್ನ ಮಿತ್ರ ಪಡೆ ನೋಡಿ ನಿನ್ನ ತಮ್ಮ ಪರಾರಿ.ಆಮೇಲಿನದ್ದು ಬಾರಿ ನಿನ್ನ ಓಡಾಟ, ನಿನಗೆ ನನ್ನ ಬೆನ್ನು ಬಿಡದ ಕಾಟ, ನಕ್ಷತ್ರಿಕನಂತೆ. ಆದರೂ ಪುನಃ ಪುನಃ ನೀನು ತಿರುಗಿ ನನ್ನನ್ನು ನೋಡುತಿದ್ದೆ, ಆಗೆಲ್ಲಾ ನಿನ್ನ್ ಕೆನ್ನೆ ಕೆಂಪಾಗಿರುತಿತ್ತು. ನಾಚಿಕೆಯಿಂದಲೋ ,ಕೋಪದಿಂದಲೋ ಗೊತ್ತಿಲ್ಲ.ಆದರೆ ಮಧ್ಯ ದಲ್ಲಿ ಒಮ್ಮೆ ನನ್ನ ಕಣ್ಣಿಂದ ಮರೆಯಾಗಿ ಹೋದ ನೀನು ಪುನಃ ಕಾಣಿಸಿದ್ದು ರಥದ ಸುತ್ತ ನೆರೆದ ಜನ ಜಂಗುಳಿಯಲ್ಲಿ. ನಮ್ಮೂರ ಜಾತ್ರೆ ಅಂದ್ರೆ ಏನ್ ತಮಾಷೇನಾ ?ಸುತ್ತ ಹತ್ತು ಊರಿನ ಜನರೆಲ್ಲಾ ಮನೆಮಂದಿ ಸಮೇತ ಬರುತ್ತಾರೆ.ದೂರದಿಂದ ನೋಡುತಿದ್ದರೆ ಅದೊಂದು ಜನ ಸಾಗರ. ಸೇರಿದ್ದ ಜನರೆಲ್ಲಾ ಉತ್ಸವದ ರಥವನ್ನು ದಿಟ್ಟಿಸಿ ನೋಡುತಿದ್ದರೆ, ನಾನು ನಿನ್ನನ್ನು ಎವೆಯಿಕ್ಕದೆ ನೋಡುತಿದ್ದೆ. ನೀನು ಕೂಡಾ ನನ್ನನ್ನು ನೋಡುತಿದ್ದೆ, ನನಗೆ ಗೊತ್ತಿಲ್ಲದಂತೆ. ನಮ್ಮೂರಿನ ಯುವಕರೆಲ್ಲ ಸೇರಿ ಬಣ್ಣ ಬಣ್ಣದ ಧ್ವಜಗಳಿಂದ, ಫಲ ಪುಷ್ಪ , ತಳಿರು ತೋರಣ ಗಳಿಂದ ರಥವನ್ನು ಅಲಂಕರಿಸಿ ಉತ್ಸವಕ್ಕೆ ಆಣಿಗೊಳಿಸುತಿದ್ದಾರೆ ಈ ಕಡೆ ನನ್ನ ನಿನ್ನ ಮಧ್ಯ ಪ್ರೀತಿಯ ಕಿರು ತೇರು ಕಳೆ ಏರುತಿತ್ತು. ಪಶ್ಚಿಮದಲ್ಲಿ ಸೂರ್ಯ ಕೆಂಪಾಗುತಿದ್ದರೆ, ನಿನ್ನ ಕೆನ್ನೆ ಯಲ್ಲೂ ಅದರ ಪ್ರತಿ ಫ ಲನ. ಅತ್ತ ರಥ ಮಂಗಳ ಘೋಷದ ಜೊತೆಗೆ ನಿಧಾನವಾಗಿ ಮುಂದಕ್ಕೆ ಚಲಿಸುತಿದ್ದರೆ ಮುಗಿಲು ಮುಟ್ಟಿ ತ್ತು ಜನರ ಜೈಕಾರ. ಆ ಗದ್ದಲದಲ್ಲೂ ಸದ್ದಿಲ್ಲದೇ ಆಗಿತ್ತು ನಮ್ಮಿಬ್ಬರ ನಡುವೆ ಪ್ರೇಮಾಂಕುರ.ಜಾತ್ರೆ ಮುಗಿಯುವ ಅಷ್ಟರಲ್ಲಿ ನಮ್ಮೀರ್ವರ ಪ್ರೇಮ ಯಾತ್ರೆ ಶುರು ಆಗಿತ್ತು. ನಮ್ಮ ಪ್ರೀತಿಯ ರಥ ಕ್ಕೆ ನಾನೇ ಸಾರಥಿ ನೀನು ಮಹಾ ರಥಿ.

ನಮಗೊ ಊರು ಸುತ್ತುವ ಭ್ರಾಂತಿ.ಹಾಗೆ ಒಂದೂರಿನಿಂದ ಇನ್ನೊಂದೂರಿಗೆ ಹೋಗುವಾಗ ಒಂದೊಂದು ಕನಸು, ಹೊಸ ಉತ್ಸಾಹ. ಬೈಕಿನ ಸ್ಪೀಡು ಹೆಚ್ಚಾಗುತಿದ್ದಂತೆ ಹಿಂದೆ ಕುಳಿತ ನೀನು ಮತ್ತಷ್ಟು ಹತ್ತಿರ. ಆಮೇಲೆ ನೀನು ನಿಮ್ಮೂರಿಗೆ ಹೋದೆ ರಜೆಯಲ್ಲಿ. ಆದರೂ ಅಪರೂಪಕೊಮ್ಮೆ ನನ್ನನ್ನು ಭೇಟಿ ಆಗುತಿದ್ದೆ, ಗುಟ್ಟಾಗಿ. ನಿನ್ನ ಭೇಟಿ ಮಾಡಿದ ದಿನ ನನಗೆ ಎಲ್ಲಿಲ್ಲದ ಖುಷಿ, ಆ ಖುಷಿಗೆ ಸಂಜೆ ಗೆಳೆಯರಿಗೆಲ್ಲ ಮಸ್ತ್ ಪಾರ್ಟಿ. ಅಂದು ನಮ್ಮೆಲ್ಲರಿಗೆ ಸಂಭ್ರಮದ ಹುಣ್ಣಿಮೆ. ರಾತ್ರಿ ಅದೇ ಗುಂಗಿನಲ್ಲಿ ಮನೆಗೆ ಬಂದು ಟೆರೆಸ್ ಮೇಲೆ ಮೈಚೆಲ್ಲಿ ಸುಮ್ಮನೇ ಆಕಾಶ ದಿಟ್ಟಿಸಿದರೆ ಮತ್ತೆ ಬೆಳದಿಂಗಳಾಗಿ ಸುರಿಯುತ್ತದೆ ನಿನ್ನ ಪ್ರೀತಿ. ಆದರೆ ನಿನ್ನ ದರ್ಶನ ಆಗದ ದಿನ ವಿಪರೀತ ಚಡಪಡಿಕೆ. ಅದೇ ಬೇಸರಕ್ಕೆ ನಾನು ಏಕಾಂಗಿಯಾಗಿ ಯಾವುದೋ ಬಾರ್ ನ ಕತ್ತಲ ಮೂಲೆಯಲ್ಲಿ. ಮನಸ್ಸು ಅಲ್ಲೋಲ ಕಲ್ಲೋಲ, ಕೈಯಲ್ಲಿ ಅಲ್ಕೋಹಾಲು, ಪೆಗ್ ನ ಪ್ರತಿ ಸಿಪ್ ನಲ್ಲೂ ನಿನ್ನದೇ ಫೀಲು.ಆಮೇಲೆ ಹೇಗೋ ಕಾಲ್ ಎಳೆದು ಕೊಂಡು ರೂಮ್ ಸೇರಿ ಕೊಂಡರೆ ಅಲ್ಲಿ ಘೋರ ಕತ್ತಲು . ಆ ಕತ್ತಲ ಕೋಣೆಯಲ್ಲಿ ಮಲಗಿ ಮಗ್ಗಲು ಬದಲಿಸಿದರೆ ಜಾರ ತೊಡಗುತ್ತದೆ ಕಣ್ಣೀರು. ಒಂದೊಂದು ಹನಿ ಕೆಳ ಗುರುಳುತಿದ್ದಂತೆ ಮನಸು ನಿರಾಳ. ಕತ್ತಲಲ್ಲಿ ಹಾಗೆ ಏಕಾಂಗಿಯಾಗಿ ಅತ್ತು ಹಗುರಾಗುತಿದ್ದರೆ ಎಂಥ ದುಃಖ ನೂ ಮಾಯ.ಇವತ್ತು ಇಷ್ಟೆಲ್ಲಾ ಹೇಳುವುದಕ್ಕೂ ಕಾರಣವಿದೆ ಗೆಳತಿ. ನೀನು ಸಿಗದೆ ಎಷ್ಟು ದಿನವಾಯ್ತು. ಆ ಖುಷಿ, ಜಾಲಿ ರೈಡು, ಮಸ್ತ್ ಪಾರ್ಟಿ, ಬೆಳದಿಂಗಳಂಥ ಪ್ರೀತಿ ಎಲ್ಲಾ ಮರೆತೇ ಹೋದಂತಿದೆ. ಆದರೆ ಮುಂದಿನ ವಾರನೇ ನಮ್ಮೂರ ಜಾತ್ರೆ. ಈಗಲೂ ನಿನಗೆ ನನ್ನ ನೆನಪಾಗದಿದ್ದರೆ ಹೇಗೆ. ಬರ್ತೀಯಲ್ಲಾ ಜಾತ್ರೆಗೆ. ಈ ಸಲದ ರಥ ಸಪ್ತಮಿ ಯ ಬೆನ್ನಿಗೆ ನಮ್ಮಿಬ್ಬರ ಸಪ್ತಪದಿ. ಆಮೇಲೆ ” ಜೊತೆಯಾಗಿ ಹಿತವಾಗಿ, ಸೇರಿ ನಲಿವ, ಸೇರಿ ನುಡಿವ ” okna .

ನಿನ್ನ ನಿರೀಕ್ಷೆಯಲ್ಲಿರಥ ಬೀದಿ ಗೆಳೆಯ

No comments: