Tuesday, July 17, 2007

ಕಾಡದಿರು ಹೀಗೆ...

ಕಾಡದಿರು ಹೀಗೆ...ಮಾರಾಯಾ,ಇಲ್ಲಿ ಹುಚ್ಚು ಮಳೆ! ಊಹುಂ, ಹುಚ್ಚು ಮಳೆಗಲ್ಲ; ಮೋಡಗಳಿಗೆ. ಅದೇನು ಸಡಗರ ಮಾರಾಯ ಅವಕ್ಕೆ... ಭುವಿ ಮಳೆಗಾಗಿ ಕಾಯುತ್ತಿರುವುದನ್ನು ನೋಡಿ ಅವಕ್ಕೆ ಅಳುವೇ ಬಂದುಬಿಡುತ್ತದೆ. ಬಿಟ್ಟು ಬಿಟ್ಟು ಬಿಕ್ಕುತ್ತವೆ.. ಖಾಲಿಯಾಯ್ತು, ಇನ್ನೇನು ಹೊಳವಾಯ್ತು ಎನ್ನುವಷ್ಟರಲ್ಲಿ ಮತ್ತೆ ಮೋಡದ ಕಣ್ಣಕೊಳದಲ್ಲಿ ಮಡುವು ಕಟ್ಟಿ ಭೂಮಿ ಮೇಲೆ ಭಾಷ್ಪಧಾರೆ. ಬಿರುಬಿಸಿಲಿನಿಂದ ಕಾದು ಕಾದು ಬಳಲಿ, ಹನಿ ನೀರಿಗಾಗಿ ಕಾದು ಕಾದು ಬೇಸತ್ತಿದ್ದ ಭುವಿಗೆ ಧೋಧೋ ಮಳೆಯ ಸಾಂಥ್ವನ.ಆ ಭುವಿಯಂತೆಯೇ ಕಾದಿದೆ ನನ್ನ ಮೈ. ಎರಡು ದಿನಗಳಿಂದ ಜೋರು ಜ್ವರ ನನಗೆ. ಚಿಟ್ಟೆ ಚಿತ್ತಾರವಿರುವ ಚಾದರ ಹೊದ್ದು ಮಲಗಿಬಿಟ್ಟಿದ್ದೇನೆ. ಈ ಪರಿ ಮಳೆಯಲ್ಲಿ ತೊಯ್ದರೆ ಮತ್ತಿನ್ನೇನಾಗೊತ್ತೆ ಹೇಳು? ಆದರೆ ಅಷ್ಟು ಚಂದದ ಮಳೆ ಬೀಳುತ್ತಿರುವಾಗ ತೋಯದೇ ಇರಲಿ ಹೇಗೆ ಹೇಳು? ನಿನ್ನ ನೆನಪೆಲ್ಲಾ ತೊಳೆದು ಹೋಗಲಿ ಎಂದುಕೊಂಡು ತೊಯ್ದೇ ತೊಯ್ದೆ. ಆದರೆ ಏನು ಮಾಡಿದರೂ ಬಿಟ್ಟು ಹೋಗುತ್ತಿಲ್ಲ ಅದು...ಹಾಸ್ಟೆಲ್ಲಿನ ನನ್ನ ಕೋಣೆಯಲ್ಲಿ ಏಕಾಂಗಿ ಮಲಗಿದ್ದೇನೆ. ಮಂಚ ನಾನು ಹೊರಳಿದಾಗ ಮಾತ್ರ ಕಿರುಗುಡುತ್ತದೆ. ಕಿಟಕಿಯಲ್ಲಿ ಮಳೆ ಕಾಣಿಸುತ್ತಿದೆ... ಅದೆಲ್ಲಿಗೇಂತ ಓಡಿ ಹೋದೆಯೋ ಮಾರಾಯಾ? ಯಾವ ದೇಶ ಅದು? ಹೇಗೆ ಹೋದೆ? ಯಾಕೆ ಹೋದೆ? ಯಾವ ಮೋಹನ ಮುರಳಿ ಕರೆಯಿತು ಅಂತ ಹೋದೆ? ನೀನು ಹೋಗುವುದೇನೋ ಹೋದೆ, ಆದರೆ ನಿನ್ನ ನೆನಪನ್ನೇಕೆ ಉಳಿಸಿ ಹೋದೆ?ಏನೆಂದರೆ ಏನೂ ಗೊತ್ತಿರಲಿಲ್ಲ ನನಗೆ ಈ ರಾಜಧಾನಿಗೆ ಬಂದ ಮೊದಲಿಗೆ. ಇಲ್ಲಿಯ ತಳುಕು-ಬಳುಕು ಜೀವನ ಭಯ ಹುಟ್ಟಿಸಿತ್ತು. ಕಷ್ಟ ಪಟ್ಟು ಹುಡುಕಿ ಹಿಡಿದ ಕೆಲಸ.. ಬಾಸ್ ಬೈದರೆ ಕಣ್ಣಲ್ಲಿ ನೀರೇ ಬಂದುಬಿಡುತ್ತಿತ್ತು.. ಯಾವ ಸಿಗ್ನಲ್ಲಿನಲ್ಲಿ ನೋಡಿದರೂ ಬೈಕಿನಲ್ಲಿ ಹುಡುಗನ ಬೆನ್ನಿಗಂಟಿ ಕುಳಿತ ಹುಡುಗಿ. ಪಾರ್ಕುಗಳು, ಕಾಫೀ ಡೇಗಳು, ಶಾಪಿಂಗ್ ಮಾಲ್‍ಗಳು... ಎಲ್ಲಿ ನೋಡಿದರೂ ಜೋಡಿಗಳೋ ಜೋಡಿಗಳು. ನನಗೆ ನಾನು ತುಂಬಾ ಒಂಟಿ ಎನ್ನಿಸತೊಡಗಿತ್ತು. ಆಗಲೇ ನಾನು ಇಂಟರ್ನೆಟ್ಟಿಗೆ ಅಡಿಕ್ಟ್ ಆಗಿದ್ದು.ಮೊದಲಿನಿಂದಲೂ ನಾನು ಪುಸ್ತಕದ ಹುಳು. ಸಾಹಿತ್ಯ ಎಂದರೆ ಹುಚ್ಚು. ನೀನು ಯಾವುದೋ ಕಮ್ಯೂನಿಟಿಯಿಂದ ಪರಿಚಯವಾದೆ. ನಿನ್ನ ಪುಟ್ಟ ಪುಟ್ಟ ಕವಿತೆಗಳನ್ನು, ಭಾವಲಹರಿಗಳನ್ನು, ಚಿಕ್ಕ-ಚೊಕ್ಕ ಕತೆಗಳನ್ನೂ ನನಗೆ ಕಳುಹಿಸುತ್ತಿದ್ದೆ. ಓದುತ್ತಿದ್ದರೆ ಏನೋ ಖುಷಿಯಾಗುತ್ತಿತ್ತು. ನೀನು ಯಾರಿಗಾಗಿ ಬರೆಯುತ್ತಿದ್ದೆಯೋ ಏನೋ? ಆದರೆ ನನಗೆ ನಿನ್ನ ಪ್ರೇಮಪತ್ರಗಳಲ್ಲಿ ನಾನೇ ಕಾಣಿಸುತ್ತಿದ್ದೆ. ಅವನ್ನು ನೀನು ನನಗಾಗಿಯೇ ಬರೆದಿದ್ದೀಯ ಎಂದುಕೊಳ್ಳುತ್ತಿದ್ದೆ. ನನಗೆ ಗೊತ್ತೇ ಆಗದ ಹಾಗೆ ನನ್ನ ಮನಸು ನಿನ್ನನ್ನು ಇಷ್ಟಪಡಲಿಕ್ಕೆ ಶುರು ಮಾಡಿಬಿಟ್ಟಿತ್ತು.

ನನ್ನ ಮೊಬೈಲ್ ನಂಬರನ್ನು ನೀನು ಪಡೆದುಕೊಂಡಮೇಲಂತೂ ಕಂತೆ ಕಂತೆ ಎಸ್ಸೆಮ್ಮೆಸ್ಸುಗಳನ್ನು ಕಳುಹಿಸುತ್ತಿದ್ದೆ. ಆ ಮೆಸೇಜುಗಳಲ್ಲಿರುತ್ತಿದ್ದ ದ್ವಂದ್ವಾರ್ಥಗಳು ನನ್ನನ್ನು ಪೂರ್ತಿ ಕನ್‍ಫ್ಯೂಸ್ ಮಾಡುತ್ತಿದ್ದವು. ನನಗೇನು ಗೊತ್ತಿತ್ತು ನಿನಗೆ ನನ್ನಂತಹ ಸಾವಿರಾರು ಗೆಳತಿಯರು ಅಂತ? ಒಬ್ಬ ಹುಡುಗ ಒಬ್ಬ ಹುಡುಗಿಯನ್ನು ಇಷ್ಟೊಂದು ಹಚ್ಚಿಕೊಂಡಿದ್ದಾನೆಂದರೆ ಅದು ಪ್ರೀತಿಯೇ ಸರಿ ಎಂದುಕೊಂಡಿದ್ದ ಮೂರ್ಖೆ ನಾನು. ಅವತ್ತು ನಾವು ಕುಳಿತಿದ್ದ ಹೋಟೆಲ್ಲಿನ ನಾಲ್ಕನೇ ಬೆಂಚಿನ ಮೇಲಿದ್ದ ಪುಟ್ಟ ಹೂದಾನಿಯಲ್ಲಿ ಗುಲಾಬಿಯೇ ಇತ್ತು. ಅಂದು ನನ್ನ ಕಣ್ಣ ಆಸೆಯನ್ನು ನಿನ್ನ ಬಳಿ ಹೇಳಿಕೊಂಡುಬಿಟ್ಟೆ. ಅದೇ ಆ ಗುಲಾಬಿಯನ್ನು ಹಾಗೇ ತೆಗೆದು ನನ್ನ ಕೈಗಿತ್ತು 'ಐ ಟೂ' ಎನ್ನುತ್ತೀಯೇನೋ ಅಂದುಕೊಂಡಿದ್ದೆ. ಆದರೆ ನೀನು ನನ್ನ ಪ್ರಪೋಸಲ್ಲನ್ನು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟೆ. ಹೂದಾನಿ ಒಡೆದು ಹೋದಂತಾಯಿತು. ನೀನು ನನ್ನನ್ನು ಪ್ರೀತಿಸುತ್ತಿರಲಿಲ್ಲ ಎಂದರೆ ನಂಬಲಿಕ್ಕೇ ಸಾಧ್ಯವಾಗಲಿಲ್ಲ ನನಗೆ... ಆದರೆ ಯಾವತ್ತು ನಿನ್ನ ಬೈಕಿನ ಹಿಂದೆ ಮತ್ಯಾರೋ ಹುಡುಗಿಯನ್ನು ನೋಡಿದೆನೋ, ಅವತ್ತು ನೀನು ಮತ್ತೆ ನನ್ನೆಡೆಗೆ ಬಂದೀಯೆಂಬ ಆಸೆಯನ್ನು ಕೈಬಿಟ್ಟೆ. ಅದ್ಯಾರೋ ನನ್ನಂಥವಳೇ ನತದೃಷ್ಟೆಯಿರಬೇಕೆಂದುಕೊಂಡೆ. ಊಹುಂ, ನಾನಲ್ಲ ನತದೃಷ್ಟೆ; ನೀನು ನತದೃಷ್ಟ. ನನ್ನಂತಹ ಹುಡುಗಿಯ ಪ್ರೀತಿಯನ್ನು ನಿರಾಕರಿಸಿದ ನೀನು ನತದೃಷ್ಟ... ಒಡೆದ ಮನಸು ಬೈದುಕೊಳ್ಳುತ್ತಿತ್ತು.ಆದರೆ ಮನಸು ಅಷ್ಟೇ ಬೇಗ ಚೇತರಿಸಿಕೊಂಡುಬಿಟ್ಟಿತು ನೋಡು! ಈಗ ನನಗೂ ಹೊಸ ಹುಡುಗ ಸಿಕ್ಕಿದ್ದಾನೆ. ಈ ಹುಡುಗ ನನ್ನನ್ನು ಎಷ್ಟು ಪ್ರೀತಿಸುತ್ತಾನೆ ಅಂತೀಯಾ..? ಅವನ ಪ್ರೀತಿಕೊಳದಲ್ಲಿ ಈಜುವಾಗ ನಾನು ಕೆಲವೊಮ್ಮೆ ಕಳೆದೇ ಹೋಗುತ್ತೇನೆ ಅಕ್ಷರಶಃ ...ಅಷ್ಟು ಆಳ ಅವನ ಪ್ರೀತಿ! ನಿನಗೆ ಈ ಪತ್ರ ಬರೆಯುತ್ತಿರುವುದು ಹೊಟ್ಟೆ ಉರಿಸುವುದಕ್ಕಲ್ಲ. ಆದರೆ, ಇಷ್ಟೆಲ್ಲಾ ಪ್ರೀತಿ ಮಾಡುವ ಹುಡುಗನಿದ್ದೂ ನೀನು ಆಗಾಗ ನೆನಪಾಗಿ ಬಂದು ಕಾಡುತ್ತೀಯಲ್ಲಾ, ಅದು ಯಾಕೆ ಅಂತ ಕೇಳುವುದಕ್ಕೆ.. ಅದ್ಯಾವುದೋ ದೇಶದಲ್ಲಿದ್ದೀಯ ನೀನೀಗ... ಇಲ್ಲಿ ಹಗಲಾದರೆ ಅಲ್ಲಿ ರಾತ್ರಿ... ನನ್ನ ಆಫೀಸ್ ಸಮಯದಲ್ಲಿ ನಿನ್ನ ಮೆಸೆಂಜರಿನ ಸ್ಟೇಟಸ್ 'ಸ್ಲೀಪಿಂಗ್!'.. ಆದರೂ ಆ ಕೆಂಪು ಗುಂಡಿಯನ್ನು ಕಳ್ಳಕಣ್ಣು ನೋಡುವುದು ಬಿಡುವುದಿಲ್ಲ.. ಯಾಕೆ ಹೀಗೆ? ಹಾಸ್ಟೆಲ್ಲಿನ ಈ ಕೋಣೆಯಲ್ಲಿ ಯಾರೆಂದರೆ ಯಾರೂ ಇಲ್ಲ. ಹೊರಗೆ ಮಳೆ. ಮಳೆ ನೋಡುತ್ತಿದ್ದರೆ ನನಗೆ ಮತ್ತೆ ಹುಚ್ಚು ಹೆಚ್ಚಾಗುತ್ತದೆ. ನಾನು ಬೆಡ್‍ಶೀಟಿನಿಂದ ಮುಖವನ್ನು ಮುಚ್ಚಿಕೊಳ್ಳುತ್ತೇನೆ... ಗಟ್ಟಿ ಕಣ್ಣು ಮುಚ್ಚಿಕೊಳ್ಳುತ್ತೇನೆ... ಹೊರಗಿನಿಂದ ನನ್ನ ಹೊಸ ಗೆಳೆಯ ಬಂದು ತಬ್ಬಿಕೊಂಡಂತೆ ಅನಿಸುತ್ತದೆ... ಬೆಡ್‍ಶೀಟ್ ಕಿತ್ತೊಗೆದು ಎದ್ದು ಕೂರುತ್ತೇನೆ... ಏನೂ ಇಲ್ಲ.. ಎದಿರುಗಡೆಯ ಗೋಡೆಯಲ್ಲಿ ನಿನ್ನದೇ ಚಿತ್ರ ಮೂಡಿಬರುತ್ತದೆ... ನೀನು ಹಲ್ಕಾ ನಗೆ ನಗುತ್ತೀಯ...

ಏಯ್, ಯಾಕೋ ಹೀಗೆ ಕಾಡ್ತೀಯಾ? ನನ್ನ ಕನಸುಗಳ ಜೊತೆ ಆಗ ಅಷ್ಟೆಲ್ಲಾ ಆಡಿದ್ದು ಸಾಕಾಗಲಿಲ್ಲವೇನೋ? ನಿನ್ನ ಹೊಸ ಗೆಳತಿಯರಿಂದ ನೀನು ಬಯಸಿದ್ದು ಸಿಗುತ್ತಿಲ್ಲವೇನೋ? ಯಾವ ದೇಶಕ್ಕೆ ಹೋದರೂ ಬಿಡದ ಇಲ್ಲಿಯ ಮೋಹ ನಿನ್ನ ಮನಸನ್ನು ವಿಕೃತಗೊಳಿಸಿದೆಯೇನೋ? ಹೇಳೋ... ಏಕೆ ಹೀಗೆ ನನ್ನ ಹಿಂದೆಯೇ ಸುತ್ತುತ್ತಿದ್ದೀಯಾ ಇನ್ನೂ? ಹೇಳು, ಕಾರಣ ಕೊಡು... ನನ್ನ ಹೊಸ ಹುಡುಗನಿಗೆ ಈ ವಿಷಯ ಗೊತ್ತಾದರೆ ನಿನ್ನನ್ನು ಕೊಂದುಬಿಟ್ಟಾನು... ಹೇಳಿದ್ದೀನಿ, ಸುಮ್ಮನಿದ್ದುಬಿಡು... ಬದುಕಿಕೊಂಡುಬಿಡು... ಹೊರಗೆ ಮಳೆ ಹೊಳವಾಗುತ್ತಿದೆ... ಹೊರಡು... ಹೊರಟುಹೋಗು ಇಲ್ಲಿಂದ... ನನ್ನ ಮನದ ಮಂದಿರದಿಂದ ಮರೆಯಾಗಿ ಹೋಗು...ನೋ ಮೋರ್ ಯುವರ್ಸ್,

No comments: